Uncategorizedಕಲೆ, ಸಾಹಿತ್ಯ, ಸಂಸ್ಕೃತಿ

ಬಸವ ರಾಷ್ಟ್ರೀಯ ಪುರಸ್ಕಾರ

Spread the love

ಪೀಠಿಕೆ
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ೨೦೨೫-೨೬ನೇ ಸಾಲಿನ ವಿವಿಧ ಪ್ರಶಸ್ತಿಗಳ ಪೈಕಿ ಬಸವ ರಾಷ್ಟ್ರೀಯ ಪುರಸ್ಕಾರ ಅತ್ಯಂತ ಪ್ರ,ಮುಖ. ಪ್ರಸಕ್ತ ಸಾಲಿನಲ್ಲಿ ಈ ಗೌರವ ಸಲ್ಲಿಕೆಯಾಗಿರುವುದು ಬೆಲ್ದಾಳದ ಡಾ. ಸಿದ್ದರಾಮ ಶರಣರಿಗೆ. ಇದು ಅತ್ಯಂತ ಸಮಂಜಸ ಮತ್ತು ಅರ್ಥಪೂರ್ಣ ಆಯ್ಕೆ. ದಲಿತ ಕೇರಿಯಲ್ಲಿ ಹುಟ್ಟಿ ಬಸವತತ್ವವ ನ್ನು ಅಳವಡಿಸಿಕೊಂಡು, ಬಸವಾನುಯಾಯಿಯಾಗಿ ನಾಡಿಗೆ, ವಚನ ಸಾಹಿತ್ಯದ ಪ್ರಚುರಕ್ಕೆ ಡಾ. ಸಿದ್ದರಾಮ ಶರಣರು ಸಲ್ಲಿಸಿರುವ ಸೇವೆ ಅನನ್ಯ ಮತ್ತು ಸಾರ್ವಕಾಲಿಕ ಮಾದರಿ. ಆ ನಿಜಶರಣರು, ನೈಜ ಸಾಧಕರ ಕುರಿತ ಕಿರುಪರಿಚಯದ ಬರಹ ಓದುಗ ಪ್ರಿಯರಿಗಾಗಿ…

ಸಂತಚೇತನ ಡಾ. ಸಿದ್ದರಾಮ ಶರಣರು

ಕರ್ನಾಟಕ ದಾರ್ಶನಿಕರ ನಾಡು, ಸಾಧು-ಸಂತರ ನೆಲೆಬೀಡು, ಕರ್ಮಯೋಗಿಗಳ ಗೂಡು. ಈ ಪುಣ್ಯಭೂಮಿಯಲ್ಲಿ ಕಾಯಕವೇ ಕೈಲಾಸ, ನಾಣ್ನುಡಿಗಳೇ ಬಾಳ ಬೆಳಕಿಂಡಿ, ವಚನಗಳೇ ಜೀವನ ದರ್ಶಕ, ಗುರುವೇ ದೇವರು, ಸಂತನೇ ಶಿವ..!
ಆದರ್ಶಮಯವಾದ ಈ ಧಾರ್ಮಿಕ ಪರಂಪರೆ ಮತ್ತು ಶರಣ ಸಂಸ್ಕೃತಿಯನ್ನು ಬೆಳಗಿದ ಮಹನೀಯರು ಅನೇಕಾನೇಕ. ಆ ಸಾಲಿನ ಹೆಗ್ಗುರುತು, ಅನುಕರಣೀಯ ಸಾಧಕರು ಪೂಜ್ಯ ಡಾ. ಸಿದ್ದರಾಮ ಶರಣರು ಬೆಲ್ದಾಳ..! ನಾಡು ಮೆಚ್ಚಿದ ಅನುಭಾವಿ, ಯೋಗಿ, ಬಸವತತ್ವ ಪ್ರಚಾರಕ, ಪ್ರವಚನಕಾರ, ಅನ್ನ, ಅಕ್ಷರ ಮತ್ತು ಆಶ್ರಯದ ತ್ರಿವಿಧ ದಾಸೋಹ, ಸಮಾಜಸೇವಾಬಂಧು..!
ಶರಣರ ನೆಲವೆಂದೇ ಹೆಸರಾದ ಬೀದರ್ ಜಿಲ್ಲೆಯ ಸಂತಶ್ರೇಷ್ಠ ಡಾ. ಸಿದ್ದರಾಮ ಶರಣರು. ಔರಾದ ತಾಲ್ಲೂಕಿನ ಕುಗ್ರಾಮ ಬೆಲ್ದಾಳ ಹುಟ್ಟೂರು. ಲಾಲಪ್ಪ-ಲಕ್ಷ್ಮೀದೇವಿ ದಂಪತಿಯ ಸುಪುತ್ರರು. ಬಡ ದಲಿತ ಕುಟುಂಬದ ಕುಡಿ. ಅಪ್ಪಟ ಶಿವಭಕ್ತ ಮನೆತನ. ಕೂಲಿಯೇ ಪರಿವಾರದ ಕಾಯಕ. ಬಾಲ್ಯದಿಂದಲೂ ಮೌನಿ, ನಿಜಧ್ಯಾನಿ. ಬಡತನದ ಬೇಗೆಗೆ ಕಲಿಕೆಯೂ ಮರೀಚಿಕೆ. 8ನೇ ವಯಸ್ಸಿನಲ್ಲಿ ತವರೂರಿನ ಅಯ್ಯನವರ ಖಾಸಗಿ ಶಾಲೆಯಲ್ಲಿ ಅಕ್ಷರಾಭ್ಯಾಸದ ಶುಭಾರಂಭ. ಶಾಲೆಯಲ್ಲಿ ಅಸ್ಪಶ್ಯತೆ. ಪ್ರತ್ಯೇಕವಾಗಿ ಕುಳಿತು ಅಭ್ಯಾಸ ಮಾಡಬೇಕಾದ ಅವಮಾನಕರ ದುಸ್ಥಿತಿ. ಶಿಕ್ಷಕರೂ ಮುಟ್ಟುವಂತಿರದ ಪರಿಸ್ಥಿತಿ..! ಆನಂತರ ಸರ್ಕಾರಿ ಶಾಲೆಗೆ ಸೇರಿದರೂ ಬದಲಾಗದ ಸ್ಥಿತಿ..! ಆದರೂ ಅಕ್ಷರಕ್ಕಿಲ್ಲ ಭೇದಭಾವ, ಕಲಿಕೆಗೆ ಇತಿಮಿತಿ. ಮೂರನೇ ತರಗತಿವರೆಗಷ್ಟೇ ಅಕ್ಷರಾಭ್ಯಾಸ. ಎಳೆವೆಯಲ್ಲೇ ಅಧ್ಯಾತ್ಮಿಕ ಪ್ರಭಾವ, ಅಪ್ಪ ಹಾಡುತ್ತಿದ್ದ ಭಕ್ತಿಗೀತೆ, ಭಜನೆ, ತತ್ವಪದಗಳಿಂದ ಲೋಕದ ತಿಳಿವು, ಅಂತರಂಗದ ಅರಿವು. .!
15ನೇ ವಯಸ್ಸಿಗೆ ಗೃಹಸ್ಥಾಶ್ರಮಕ್ಕೆ. ಅಕ್ಕನಾಗಮ್ಮರೊಂದಿಗೆ ಬಾಲ್ಯವಿವಾಹ. ಜೀವನ ನಿರ್ವಹಣೆಗೆ ಹೊಲಿಗೆ ಕಾಯಕದಾಸರೆ, ಭಜನೆ, ಭಕ್ತಿಗೀತೆ, ತತ್ವಪದಗಳು, ಸಾಧುಸಂತರ ಪುಸ್ತಕದ ಅಧ್ಯಯನದಿಂದ ಆತ್ಮತೃಪ್ತಿ. ಅನವರತ ಭಕ್ತಿಯ ಹುಚ್ಚು..! ಆನಂತರ ವ್ಭೆದಾಂತವೇ ಬದುಕಿನ ಸಿದ್ಧಾಂತ. 19ರ ಹರೆಯದ ಹೊತ್ತಿಗೆ ಶಿವಯೋಗ ಸಾಧನೆಯಲ್ಲಿ ತತ್ಪರತೆ. ನಿತ್ಯ ರಾತ್ರಿ ಮೂರು ಗಂಟೆಗೆ ಎದ್ದು ಸ್ನಾನ ಮಾಡಿ ಗ್ರಾಮದ ಹೊರಗಿನ ಗುಡ್ಡವೊಂದರಲ್ಲಿ ಶಿವಯೋಗ ಸಾಧನೆ. ಸತತ ಐದಾರು ವರ್ಷ ಅದೇ ದಿನಚರಿ. ಮನಕೆ ಪರಮಶಾಂತಿ, ಐದೇ ವರ್ಷದ ದಾಂಪತ್ಯದ ಲೌಕಿಕ ಬದುಕಿನಲ್ಲಿ ಮಹಾದೇವ, ಶಿವಕುಮಾರ್ರ ತಂದೆಯಾಗಿದ್ದಷ್ಟೇ..! ಉಳಿದಂತೆ ಬದುಕೇ ಯೋಗಸಿದ್ಧಿ, ಸೇವೆ ಮತ್ತು ಜ್ಞಾನಕ್ಕೆ ಸಮರ್ಪಣೆ..!
1974ರ ಜನವರಿ 14. ಡಾ. ಸಿದ್ದರಾಮ ಶರಣರ ಬದುಕಿನ ತಿರುವಿನ ಕ್ಷಣ. ಔರಾದ್ನ ಅವರೇಶ್ವರ ದೇವಾಲಯದಲ್ಲಿ ಸಿದ್ದರಾಮೇಶ್ವರ ಜಯಂತಿ. ಭಾಲ್ಕಿಯ ಪೂಜ್ಯ ಚನ್ನಬಸವ ಪಟ್ಟದೇವರ ಸಮ್ಮುಖದಲ್ಲಿ 15 ನಿಮಿಷ ಭಾಷಣ. ಅಪ್ಪಗಳಿಂದ ಅಪ್ಮ್ಪಗೆ. ಸಿದ್ದರಾಮ ಸಿಕ್ಕನೆಂಬ ಸಂತಸ. ಮರುವರ್ಷ 1975ರ ಫೆಬ್ರವರಿ 28ರಂದು ಬಸವಕಲ್ಯಾಣ ಅನುಭವ ಮಂಟಪದಲ್ಲಿ ಅಪ್ಪಗಳವರಿಂದ ಜಂಗಮದೀಕ್ಷೆ..!
ಮುಂದಿನದು ಜಗವೇ ಕುಟುಂಬ, ಬದುಕೇ ಅಧ್ಯಾತ್ಮ, ಸೇವೆಯೇ ಉಸಿರು..! 20 ದಲಿತ ಮಕ್ಕಳ ದತ್ತು ಪಡೆದು ಅನ್ನ, ವಸತಿ, ಅಕ್ಷರ ದಾಸೋಹ. ಸ್ವಂತ ಕಾಯಕದ ಹಣ, ಭೂಮಿಯ ಆದಾಯವೇ ತ್ರಿವಿಧ ದಾಸೋಹಕ್ಕೆ ಆಧಾರ..! ಬಹುಜನರ ಒತ್ತಾಯದ ಮೇರೆಗೆ 1980ರಲ್ಲಿ ಕೌಠಾ (ಬಿ) ಗ್ರಾಮದ ದಂಡೆಯ ಮೇಲೆ ಬಸವ ಯೋಗಾಶ್ರಮ ಸ್ಥಾಪನೆ. ಹುಲ್ಲಿನ ಗುಡಿಸಿಲಿನಲ್ಲಿ ಶರಣತತ್ವ ಪ್ರಸಾರದ ಶುಭಾರಂಭ. 1981ರಲ್ಲಿ ಆಶ್ರಮ ಮಕ್ಕಳ ವ್ಯವಸ್ಥೆಗೆ ಮಾದಾರ ಚನ್ನಯ್ಯನವರ ಪ್ರಸಾರ ನಿಲಯವೆಂದು ನಾಮಕರಣ. ಮರುವರ್ಷ ಹರಳಯ್ಯ ಪ್ರೌಢಶಾಲೆಯ ಆರಂಭ. ಸಂಯುಕ್ತ ಪದವಿಪೂರ್ವ, ಪದವಿ ಮಹಾವಿದ್ಯಾಲಯವಾಗಿ ಬೆಳೆಸಿದ ಹಿರಿಮೆ, 600 ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಗರಿಮೆ.
ಅಕ್ಷರ ದಾಸೋಹದ ಜತೆಗೆ ಬಸವತತ್ವ ಪ್ರಚಾರದಲ್ಲಿ ತಲ್ಲೀನ. ಹುಬ್ಬಳ್ಳಿ, ಧಾರವಾಡದಲ್ಲಿ ಆರಂಭವಾದ ಒಂದೊಂದು ತಿಂಗಳ ಬಸವತತ್ವ ಜಾಗೃತಿ ಪಯಣ ದೇಶ, ವಿದೇಶಗಳಿಗೂ ವಿಸ್ತಾರ, ಪ್ರವಚನ ಕಾಯಕದಲ್ಲಿ ಅನವರತ ನಿರತ. ಕಲ್ಯಾಣ ನಾಡಿನ ಶರಣ ಪರಿಷತ್ತಿನ ಅಧ್ಯಕ್ಷರಾಗಿ ಹಲವು ನಗರಗಳಲ್ಲಿ ರಾಷ್ಟ್ರ ಮಟ್ಟದ ಸಮ್ಮೇಳನ ಆಯೋಜಿಸಿದ ಕೀರ್ತಿ. ಬಸವಕಲ್ಯಾಣದಲ್ಲಿ ಬಸವ ಮಹಾಮನೆ ಸ್ಥಾಪನೆ, ಶಿವಯೋಗ ಪರಿಷತ್ತು, ಧ್ಯಾನ ಯೋಗ ಪರಿಷತ್ತು, ಶರಣ ಸಂಸತ್ತುಗಳ ಆರಂಭ. ಆರು ಶರಣ ಸಂಸತ್ ಅಧಿವೇಶನ ಯಶಸ್ವಿಗೊಳಿಸಿದ ಸಾರ್ಥಕತೆ. ಅಧ್ಯಯನದಿಂದ ಒಲಿದ ಬರವಣಿಗೆ. ವಚನ ತತ್ವ ಸಾರ, ಭಗವಾನ್ ಬುದ್ಧ, ಕರುಳ ಕಲೆ, ಬೆಡಗಿನ ಬೆಳಕು, ವಚನ ತತ್ವಾನುಭವ, ಬಸವತತ್ವ ಪ್ರದೀಪಿಕೆ, ಶಿವಯೋಗ ಸುಖ, ನಿರ್”ುತಿ ಸೇರಿ ಹಲವಾರು ಕೃತಿಗಳ ರಚನೆ. ಶೂನ್ಯ ಸಂಪಾದನೆಯ ರಹಸ್ಯ ನಾಲ್ಕು ಸಂಪುಟಗಳ ಬೃಹತ್ ಗ್ರಂಥ ರಚನೆ.
ಬಸವಶ್ರೀ ಆಸ್ಪತ್ರೆ ಸ್ಥಾಪಿಸಿ ಉಚಿತ ಆರೋಗ್ಯ ಸೇವೆ, 2 ಎಕರೆ ಭೂಮಿ ಖರೀದಿಸಿ 60 ಬಡವರಿಗೆ ಉಚಿತವಾಗಿ ಹಂಚಿ ಮನೆ ಮಂಜೂರು ಮಾಡಿದ ಸೇವಾಮೂರ್ತಿ. ಧರ್ಮಾಂಧತೆ, ಜನಾಂಗೀಯ ಭೇದ, ಪ್ರತ್ಯೇಕತೆ, ಕೋಮುಗಲಭೆಗಳ ವಿರುದ್ಧ ನಿರಂತರ ಜನಜಾಗೃತಿ ಮೂಡಿಸಿದ ಡಾ. ಸಿದ್ದರಾಮ ಶರಣರು, ಬೆಲ್ದಾಳ ಶರಣರೆಂದು ಸುವಿಖ್ಯಾತಿ. ಬಸವ ಕಲ್ಯಾಣದಲ್ಲಿ ಸರ್ಕಾರ ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿ-ಕಟ್ಟಡ ದಾನ ಮಾಡಿರುವ ಕೊಡುಗೈ ದಾನಿ.
ನಾಲ್ಕು ದಶಕಗಳ ಅನನ್ಯ ಸೇವೆಗಾಗಿ ಡಾ. ಸಿದ್ದರಾಮ ಶರಣರು ಬಸವಸಾಧಕ ಪ್ರಶಸ್ತಿ, ಕಾಯಕ ಪ್ರಶಸ್ತಿ, ಸುವರ್ಣ ಸಿರಿ, ಕರ್ನಾಟಕ ರತ್ನ ಪ್ರಶಸ್ತಿ, ಮೊದಲ ಬಸವಶ್ರೀ ಪ್ರಶಸ್ತಿ, ರಮಣಶ್ರೀ ಜೀವಮಾನ ಪ್ರಶಸ್ತಿ, ಕಲಬುರಗಿ ವಿವಿಯ ಗೌರವ ಡಾಕ್ಟರೇಟ್ ಮುಂತಾದ ಅಪಾರ ಗೌರವಗಳಿಗೆ ಭಾಜನರು, ಕೋಟ್ಯಂತರ ಭಕ್ತರ ಪ್ರೀತಿ-ಭಕ್ತಿಗಳಿಂದ ಸದಾಕಾಲಕ್ಕೂ ಪೂಜಿತರು. ಈ ಅಪೂರ್ವ ಸಂತಚೇತನಕ್ಕೆ ಇದೀಗ ಕರ್ನಾಟಕ ಸರ್ಕಾರ ಕೊಡಮಾಡುವ 2025-26ನೇ ಸಾಲಿನ ಪ್ರತ್ಠಿತ ಬಸವ ರ್ಟ್ರಾೀಯ ಪುರಸ್ಕಾರದ ಹೊನ್ನಗರಿ, ಸರ್ಕಾರಕ್ಕೆ ಹೆಮ್ಮೆಯ ಭಾವ..!

ಸಿದ್ಧರಾಮ ಶರಣರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ