ಜನರ ಕೋಟಿ-ಕೋಟಿ ತೆರಿಗೆ ಹಣದಲ್ಲಿ ತಮ್ಮ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ, ಅಸಲಿಗೆ ಅಭಿವೃದ್ಧಿಯೇ ಆಗಿಲ್ಲ ಎಂದ ಎಚ್.ಡಿ.ಕೆ…!!

0
637

Kannada News | Karnataka News

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದ ಪ್ರಚಾರಕ್ಕಾಗಿ ಜನರ ತೆರಿಗೆ ಹಣವನ್ನು ಬಳಸುತ್ತಿದ್ದಾರೆ, ಇವರು ನೀಡಿರುವ ಜಾಹಿರಾತುಗಳು ವಾಸ್ತವಕ್ಕೆ ಬಲು ದೂರವಾಗಿವೆ. ಏನು ಅಭಿವೃದ್ಧಿ ಆಗದೆ ಇವರು ಕೇವಲ ಶೋಕಿಗಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

ರಾಯಚೂರು ಜಿಲ್ಲೆ, ಮಾನ್ವಿಯ ಟಿಎಪಿಸಿಎಂಎಸ್‌ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ವಿಕಾಸ ಪರ್ವ ಯಾತ್ರೆ” ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ, ಸ್ಥಳೀಯ ಜನರ ಕುಂದು ಕೊರತೆಗಳನ್ನು ಅರಿಯದೆ ಬರೀ ಒಬ್ಬರನ್ನೊಬ್ಬರು ಟೀಕಿಸುತ್ತಿದ್ದಾರೆ ಎಂದರು.

ಇನ್ನು ಬಿಜೆಪಿಯ ಪ್ರಚಾರಕ್ಕಾಗಿ ಬಂದಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಗ್ಗೆ ಮಾತನಾಡಿದ ಅವರು. ಯೋಗಿ ತಮ್ಮ ಸ್ವಂತ ಕ್ಷೇತ್ರದಲ್ಲಿ ಆಕ್ಸಿಜನ್‌ ಸಿಗದೇ 150 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಸ್ವಂತ ರಾಜ್ಯದ ಮಕ್ಕಳನ್ನೇ ರಕ್ಷಿಸಿಕೊಳ್ಳಲಾಗದ ಅವರು, ಕರ್ನಾಟಕಕ್ಕೆ ಬಂದು ಸುರಕ್ಷಾ ಭರವಸೆ ಕೊಟ್ಟಿರುವುದು ಹಾಸ್ಯಸ್ಪದವಾಗಿದೆ ಎಂದು ಟಾಂಗ್ ನೀಡಿದ್ದಾರೆ.

ಸಾರ್ವಜನಿಕರ ತೆರಿಗೆ ಹಣ ಬಳಸಿ, ಸರ್ಕಾರ ತಮ್ಮ ಸ್ವಂತಕ್ಕಾಗಿ ಜಾಹೀರಾತು ನೀಡಿ, ಕೋಟ್ಯಾಂತರ ರೂಪಾಯಿ ಹಾಳುಮಾಡುತ್ತಿದೆ. ವಾಸ್ತವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ರಾಜಕೀಯಕ್ಕೆ ಕರಾವಳಿ ಭಾಗದ ಯುವಕರು ಬಲಿಯಾಗುತ್ತಿದ್ದಾರೆ ಎಂದರು.

ರಾಜ್ಯದ ರೈತರ ಖಾತೆಗೆ ಪರಿಹಾರದ ಹಣ ಇನ್ನು ಜಮಾ ಆಗಿಲ್ಲ, ರಾಜ್ಯದಲ್ಲಿ 3700 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರೈತರು ಮಾಡಿರುವ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ ಅದು ಬರೀ ಸುಳ್ಳು ಯಾವ ಹಣವು ಜಮಾ ಆಗಿಲ್ಲ, ವಸತಿ ಯೋಜನೆಯಡಿ ಈಗಾಗಲೇ 15 ಲಕ್ಷ ಮನೆ ಕಟ್ಟಿದ್ದೇವೆಂದು ಸಿಎಂ ಹೇಳಿರುವುದು ಸುಳ್ಳು ಮತ್ತು ಅವರಂತೆ ಅವರ ಯೋಜನೆಗಳು ಬರೀ ಸುಳ್ಳು ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ತಾಸುಗಳಲ್ಲೇ ರಾಜ್ಯದ ಎಲ್ಲ ರೈತರ 58 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇವೆ. ಗರ್ಭಿಣಿಯರ ಆರೈಕೆಗೆ ಮಾಸಿಕ 6 ಸಾವಿರ ರೂ.ಗಳಂತೆ ಆರು ತಿಂಗಳು ಕಾಲ ಒಟ್ಟು 36 ಸಾವಿರ ರೂ. ನೀಡಲಾಗುವುದು. ವೃದ್ಧರು ಹಾಗೂ ವಿಧವೆಯವರ ಮಾಸಿಕ ಪಿಂಚಣಿಯನ್ನು 5 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

Also Read: ಸಿದ್ದರಾಮಯ್ಯ ಸರ್ಕಾರದಿಂದ ಪೊಲೀಸರಿಗೆ ಕಿಂಚಿತ್ತೂ ಗೌರವ ಸಿಗುತ್ತಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಲು ಅವರೇ ನೇರ ಹೊಣೆ: ಹಿರಿಯ ಐ.ಪಿ.ಎಸ್. ಅಧಿಕಾರಿಗಳು!!

LEAVE A REPLY

Please enter your comment!
Please enter your name here